ಜೋಗಿ -
ಜೋಗಿ ಎಂಬುದು ಯೋಗ ಶಬ್ದದ ಕನ್ನಡ ತದ್ಬವರೂಪವಾದರೂ ಎರಡಕ್ಕೂ ಒಂದೇ ಅರ್ಥವಿಲ್ಲ. ಜೋಗಿಗೆ ಜೋಗಿ ತಬ್ಬಿಕೊಂಡರೆ ಮೈಯೆಲ್ಲಾ ಬೂದಿ; ಜೋಗಿ ಜೋಗಿ ತಟ್ಯಾಡಿದರೆ ಬುರುಡೆ ಬುರುಡೆ ತಟ್ಯಾಡಿತು. ಕಿಟ್ಟಲ್ ಕೋಶದಲ್ಲಿ ಈ ಗಾದೆಗಳನ್ನು ಜೋಗಿ ಶಬ್ದದ ವಿವರಣೆಯಲ್ಲಿ ಕೊಡಲಾಗಿದೆ. ಮೊದಲನೆಯ ಗಾದೆ ಯಾವುದೋ ಧಾರ್ಮಿಕ ಸಂಪ್ರದಾಯವನ್ನೂ ಎರಡನೆಯದು ವೃತ್ತಿಗಾಯನ ಸಂಪ್ರದಾಯವೊಂದನ್ನೂ ನಿದೆರ್Éೀಶಿಸುತ್ತದೆ. ಶೈವ ಕ್ಷೇತ್ರಗಳಿಗೆ ನಡೆದುಕೊಳ್ಳುವ ಭಕ್ತರ ಮನೆಯಲ್ಲಿ ಪರ ಪಕ್ಷಗಳು ನಡೆದಾಗ ದೇವರ ತ್ರಿಶೂಲಗಳನ್ನು ತಂದು ಎಡೆಯನ್ನು ಪೂಜಿಸುವ ಜೋಗಿಗಳ ಒಂದು ವರ್ಗವುಂಟು. ಇವರು ಗಾಯಕರಲ್ಲ. ಸಿಂಗನಾತ ಎಂಬ ವಾದ್ಯವನ್ನು ಪೂಜೆಯ ಸಂದರ್ಭದಲ್ಲಿ ಊದುತ್ತಾರಾದರೂ ಹಾಡುಗಾರಿಕೆಗೆ ಬಳಸುವುದಿಲ್ಲ. ಇವರು ಜೋಗಪ್ಪಗಳು ಹಾಡುಗಾರಿಕೆಯನ್ನೇ ಪ್ರಧಾನವೃತ್ತಿಯನ್ನಾಗಿ ಸ್ವೀಕರಿಸಿ ವಾದ್ಯವೊಂದನ್ನು ಹಿಡಿದು; ಊರಾಡಲು ಹೋಗುವ ಮತ್ತೊಂದು ವರ್ಗದ ಜೋಗಿಗಳಿದ್ದಾರೆ. ಇವರೇ ಕಿನ್ನರಿ ಜೋಗಿಗಳು. ಜೋಗಿ ಯಾವನೋ ಧಾರ್ಮಿಕ ಪುರುಷ ಸಂನ್ಯಾಸಿ ಬೈರಾಗಿ ಎಂಬ ಕಲ್ಪನೆಯನ್ನು ತಂದರೂ ಇವರಾರು ಆ ವರ್ಗಕ್ಕೆ ಸೇರಿದವರಲ್ಲ. ಸಂಸಾರಿಗಳ ಶೈವಪಂಥದ ಮಠವೊಂದರಲ್ಲಿ ದೀಕ್ಷೆ ಪಡೆದು ಜೋಗಿ ಎನಿಸಿಕೊಂಡರು.

	ಜೋಗಿಗಳಲ್ಲಿ ಅನೇಕ ವರ್ಗಗಳಿವೆ. ಹಂಡೆಜೋಗಿ, ಬಾಲಜೋಗಿ, ಎಣ್ಣೆಜೋಗಿಗಳು ಮುಖ್ಯರಾದವರು. ಹಂಡೆ ಜೋಗಿಗಳು ಜನಪ್ರಿಯ ವೃತ್ತಿ ಗಾಯಕರಾದ ಕಿನ್ನರಿಜೋಗಿಗಳು. ಇವರನ್ನು ಭೈರೇಜೋಗಿಗಳೆಂದೂ ಕರೆಯಲಾಗುತ್ತದೆ. ಇವರು ಭೈರವನ ಆರಾಧಕರು. ಚುಂಚನಗಿರಿ ಇವರ ಮುಖ್ಯ ಧಾರ್ಮಿಕ ಕ್ಷೇತ್ರ. ಕಾಪಾಲಿಕ ಪಂಥದ ಪ್ರಭಾವವೂ ಇವರ ಮೇಲೆ ಆದಂತೆ ತೋರುತ್ತದೆ. ಹಂಡಿ ಬಣಗನಾಥ ಮಠ. ನಾಸಿಕದಲ್ಲಿರುವ ಕಾಪಾಲಿ ಪಂಥದ ಮಠ, ಕುಂತಿಮಠ, ಚುಂಚನಗಿರಿ ಮಠ, ಹೇಮಾವತಿ ಮಠ, ಪಗಡನ ಬಂಡೆ ಮಠ, ಕದರಿ ಮಠ-ಮುಂತಾದ ನಾಥಸಂಪ್ರದಾಯದ ಮಠಗಳನ್ನು ತಮಗೆ ಸಂಬಂಧಪಟ್ಟಂತೆ ಇವರು ಹೇಳಿಕೊಳ್ಳುತ್ತಾರೆ. ಆದರೆ ಇವರನ್ನು ಧಾರ್ಮಿಕ ವೃತ್ತಿಗಾಯಕರಾಗಿ ಪರಿಗಣಿಸಿಲ್ಲ. ಪಂಥ ಧರ್ಮಗಳಿಗೆ ಸಂಬಂಧಪಟ್ಟ ಯಾವ ಧಾರ್ಮಿಕ ಕಾವ್ಯವನ್ನೂ ಇವರು ಹಾಡುವುದಿಲ್ಲ. ಆದರೆ ಲೌಕಿಕ ಕಾವ್ಯವಾದ ಮಹಾಭಾರತವನ್ನು ಅನೇಕ ರಾತ್ರಿಗಳು ಹಾಡುತ್ತಾರೆ. ಆದುದರಿಂದ ಇವರು ಲೌಕಿಕ ವೃತ್ತಿಗಾಯಕರಾಗಿಯೇ ಉಳಿಯುತ್ತಾರೆ.

	ಜೋಗಿ ಎಂಬುದು ಒಂದು ಜನಾಂಗದ ಹೆಸರೂ ಹೌದು. ಅನೇಕ ಕಡೆ ಇವರು ತಮ್ಮದೇ ಆದ ಪಾಳೆಯಗಳನ್ನು ಕಟ್ಟಿಕೊಂಡು ವಾಸಿಸುತ್ತಾರೆ. ಈಗ ಇವರ ವೃತ್ತಿ ಹಾಡುತ್ತಾ ಭಿಕ್ಷೆ ಎತ್ತುವುದೇ ಆಗಿದೆ. ಹಿಂದೆ ಸಮಾಜದಲ್ಲಿ ಜೋಗಿಗಳ ಸ್ಥಾನಮಾನ ಗಣ್ಯವಾದುದಾಗಿತ್ತು ಎಂಬುದಕ್ಕೆ ಅನೇಕ ಆಧಾರಗಳು ಸಿಕ್ಕುತ್ತವೆ. ಅವರನ್ನು ಆಹ್ವಾನಿಸಿ ಹಾಡುಗಾರಿಕೆಯನ್ನು ಏರ್ಪಡಿಸುತ್ತಿದ್ದರು. ಕಿನ್ನರಿಜೋಗಿಯ ಬಣ್ಣನೆಗಳು ಮೇಲಿಂದ ಮೇಲೆ ಜನಪದ ಸಾಹಿತ್ಯದಲ್ಲಿ ಬರುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಚುಂಚನಗಿರಿಯ ಭೈರವನನ್ನೇ ಒಬ್ಬ ಕಿನ್ನರಿ ಜೋಗಿಯಾಗಿ ಕಾಣಲಾಗಿದೆ.
	ಚುಂಚನಗಿರಿಯಪ್ಪ ಸೂಜಿಗಲ್ಲಿನ ಮೇಲೆ
	ನಿಂತು ಕಿನ್ನುಡಿಯ ನುಡಿಸೋನೆ ಭೈರುವ
	ನಿನ್ನ ಸೊಲ್ಲಾದವೆಲ್ಲ ಅಪರಂಜಿ

	ಕಿನ್ನರಿಯನ್ನು ಹಿಡಿದವನು ದೈವಸಮಾನವಾದ ವ್ಯಕ್ತಿ. ಗೌರವಾನ್ವಿತ ವ್ಯಕ್ತಿ. ಜನತೆಯಲ್ಲಿ ಅವನ ಬಗ್ಗೆ ಆದರ ಹೆಚ್ಚು.

	ಕಿನ್ನರಿಯ ಸ್ವಾಮಿ ನನ್ನ ಕೇರಿಗೆ ಬಾರೊ
	ನಮ್ಮಲ್ಲಿ ಒಬ್ಬ ಸೂಜಾಣ ಕಂದಯ್ಯ
	ನಿನ್ನ ಕಿನ್ನುಡಿಗೆ ದನಿಯ ಕೊಡುತ್ತಾನೆ
	ಕಿನ್ನರಿಯ ಜೋಗಿ ಎಲ್ಲರಿಗೂ ಬೇಕಾದವನು. ಸುಸಂಸ್ಕøತ ಅಸಂಸ್ಕøತರೆನ್ನದೆ ಮೇಲು-ಕೀಳು ಎನ್ನದೆ ವಿದ್ಯಾವಂತ-ಅವಿದ್ಯಾವಂತ ಎನ್ನದೆ ಎಲ್ಲರೂ ಅವರನ್ನು ಕರೆದು ಹಾಡಿಸುವ ಗೌರವಿಸುವ ಸಂದರ್ಭಗಳು ಅನೇಕ ಕಂಡುಬರುತ್ತವೆ. ಹೆಂಗಳೆಯರು ಅವನ ಕಿನ್ನರಿಯ ನಾದಕ್ಕೆ ಅವನ ಕತೆಗಳ ಸೊಗಸಿಗೆ ವೇಷ ಭೂಷಣಗಳ ಆಕರ್ಷಣೆಗೆ ಸಹಜವಾಗಿ ಸೋಲುತ್ತಿದ್ದರು. ಕಿನ್ನರಿಜೋಗಿಯೊಬ್ಬನನ್ನು ನೆನೆದು ಹಂಬಲಿಸುವ ಗೆಣೆಕಾತಿಯೊಬ್ಬಳ ಹೃದಯದ ಮಿಡಿತವನ್ನು ಒಂದು ತ್ರಿಪದಿ ಸುಂದರವಾಗಿ ಚಿತ್ರಿಸುತ್ತದೆ.

	ಹಾರವನ ಕೇರಿಯ ಗಾರೆಜಗಲಿಯ ಮೇಲೆ
	ಭಾರಿ ಕಿನ್ನುಡಿಯ ನುಡಿಸೋನೆ ಗೆಣಕಾರ
	ಮೊಗ್ಗಾಗಿ ಬಾರೋ ತುರುಬೀಗೆ

	ಕಿನ್ನರಿಜೋಗಿಗಳ ವೇಷಭೂಷಣಗಳೂ ಮೋಹಕವಾದುವು. ಅವರದು ಆಕರ್ಷಕವಾದ ಬಣ್ಣದ ಮುಂಡಾಸು, ಮಣಿಕುಚ್ಚು, ತುರಾಯಿ, ಮುತ್ತಿನ ಸರ. ಗಾಜಿನ ಕೊಳವೆ, ಗುಳಾಪುಗಳು-ಇದನ್ನು ಅಲಂಕರಿಸುತ್ತಿದ್ದವು. ಒಂದು ಬದಿಯಲ್ಲಿ ಬಣ್ಣದ ವಸ್ತುವೊಂದನ್ನು ಸಿಕ್ಕಿಸಿ ಸಣ್ಣ ತ್ರಿಶೂಲವನ್ನು ಅಲ್ಲಿ ಅಳವಡಿಸುವರು. ಹಣೆಯಲ್ಲಿ ವಿಭೂತಿ ಗಂಧಗಳೆರಡನ್ನೂ ಧರಿಸುವುದು ಸಂಪ್ರದಾಯ. ಕರಿಯ ನಿಲುವಂಗಿ, ಶುಭ್ರವಾದ ಕಚ್ಚೆಯ ಪಂಚೆ, ಹೆಗಲಲ್ಲಿ ಜೋಳಿಗೆ, ಕೈಯಲ್ಲಿ ಕಿನ್ನರಿ ಹಿಡಿದು ಊರಾಡಲು ಹೊರಡುತ್ತಿದ್ದ ಇವರ ಮೋಜು ವಿಶಿಷ್ಟವಾದುದೇ ಸರಿ. ಕೆಲವು ಜೋಗಿಗಳು ಕಾವಿಬಣ್ಣ ಕಲ್ಗಿ ತುರಾಯಿ ಮಣಿ ಮುಂಡಾಸು ಕೊರಳ ರುದ್ರಾಕ್ಷಿ ಮೈಮೇಲೆ ಬಣ್ಣಬಣ್ಣದ ವಸ್ತ್ರ-ಇವುಗಳೊಡನೆಯೂ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇವರ ವೇಷಭೂಷಣದ ವೈಖರಿ ಈಗ ಕಣ್ಮರೆಯಾಗುತ್ತಿದೆ. ಸಾದಾ ಉಡುಪಿನ ಜೋಗಿಗಳು ಮಾತ್ರ ಮಲೆನಾಡು ಭಾಗದಲ್ಲಿ ಮಧ್ಯಕರ್ನಾಟಕದ ಕೆಲವಡೆ ಕಾಣಿಸಿಕೊಳ್ಳುತ್ತಾರೆ. ಉಳಿದೆಡೆಗಳಲ್ಲಿ ಆ ಸಂಪ್ರದಾಯ ಸಂಪೂರ್ಣವಾಗಿ ಮರೆತುಹೋಗಿದೆ.

	ಜೋಗಿಗಳ ವಾದ್ಯವಾದ ಕಿನ್ನರಿ ಭಾರತಾದ್ಯಂತ ಜನಪ್ರಿಯವಾಗಿರುವ ವಾದ್ಯ. ಪಾಂಡವರು ವನವಾಸದಲ್ಲಿದ್ದಾಗ ಜೋಗಿಗಳನ್ನು ಗುರುತಿಸಿ ಸಿಂಗನಾದವನ್ನು ಊದಿಕೊಂಡು ಇದ್ದ ಇವರಿಗೆ ಕಿನ್ನರಿಯನ್ನು ಕೊಟ್ಟರು. ಪಂಚಪಾಂಡವರನ್ನು ಕೊಂಡಾಡಿಕೊಂಡಿರಿ ಎಂದು ಹೇಳಿದರು-ಎಂಬ ವಿವರಗಳನ್ನು ಹೇಳುತ್ತಾರೆ. ಭೂ ಪ್ರದಕ್ಷಿಣೆ ಮುಗಿಸಿಕೊಂಡು ಬಂದ ಅರ್ಜುನ ತನ್ನ ತಾಯಿಯನ್ನು ಆಶ್ಚರ್ಯ ಚಕಿತಳನ್ನಾಗಿ ಮಾಡಬೇಕೆಂದು ಜೋಗಿಯ ವೇಷ ಹಾಕಿಕೊಂಡು ಬಂದ. ಕೈಯಲ್ಲಿ ಕಿನ್ನರಿಯನ್ನು ಹಿಡಿದು ಮನೆಯ ಬಾಗಿಲಲ್ಲಿ ಕುಣಿಯುತ್ತ ಹಾಡುತ್ತ ಅವಳನ್ನು ಸಂತುಷ್ಟಳನ್ನಾಗಿ ಮಾಡಿದ. ಕೊನೆಗೆ ಅವನೇ ತನ್ನ ಮಗ ಅರ್ಜುನ ಎಂದು ತಿಳಿದ ಕುಂತಿ ಹರ್ಷಪುಳಕಿತಳಾದಳು. ಅರ್ಜುನ ತನ್ನ ಜೊತೆಯಲ್ಲಿ ಕರೆತಂದಿದ್ದ ವಟುವೊಬ್ಬನಿಗೆ ಕಿನ್ನರಿ ಹಾಗೂ ಇತರ ಬಿರುದುಗಳನ್ನು ಕೊಟ್ಟು ಲೋಕದ ಮೇಲೆ ಪಾಂಡವರ ಕತೆಯನ್ನು ಹಾಡಿಕೊಂಡಿರಿ ಎಂದು ಹೇಳಿ ಬೀಳ್ಕೊಟ್ಟ. ಈಗಿನ ಕಿನ್ನರಿಜೋಗಿಗಳೆಲ್ಲ ಈ ಪರಂಪರೆಗೆ ಸೇರಿದವರು ಎಂಬ ಒಂದು ಕತೆಯೂ ಇದೆ.

	ಜೋಗಿಗಳ ಕಿನ್ನರಿ ಒಂದು ತಂತೀವಾದ್ಯ. ಮೂರು ಸೋರೆ ಬುರುಡೆಗಳನ್ನು ಒಂದು ಮಾರು ಉದ್ದದ ಬಿದಿರಕೋಲೊಂದಕ್ಕೆ ಅಳವಡಿಸಿ ಮಾಡಿಕೊಂಡ ವಾದ್ಯ ಇದು. ಬುರುಡೆಗಳನ್ನು ಕೋಲಿನ ಕೆಳಭಾಗಕ್ಕೆ ಸೇರಿಸಿ ಕಟ್ಟಲಾಗುವುದು. ಮತ್ತೊಂದು ಭಾಗಕ್ಕೆ ಚಿಪ್ಪು ಹಂದಿಯ ಚಿಪ್ಪುಗಳನ್ನು ಸಂಗ್ರಹಿಸಿ ಒಂದರ ಪಕ್ಕದಲ್ಲೊಂದರಂತೆ ಹತ್ತು ಅಥವಾ ಹನ್ನೆರಡು ಸಾರಿಗಳನ್ನು ಜೇನುಮೇಣದಿಂದ ಅಂಟಿಸಲಾಗುವುದು. ಈ ಸಾರಿಗಳ ಮೇಲೆ ತಂತಿಗಳು ಹಾದುಹೋಗಿರುತ್ತವೆ. ಕಿನ್ನರಿ, ಜೋಗಿಗಳಿಗೆ ಪವಿತ್ರವಾದ್ಯ. ಅದನ್ನು ವೀಣೆ, ಸರಸ್ವತಿ ಎಂದೂ ಕರೆಯಲಾಗುತ್ತದೆ. ಪೂಜಾರ್ಹವಾದ ವಸ್ತುವಾದ್ದರಿಂದ ಬಳಸದ ಸಂದರ್ಭದಲ್ಲಿ ಅದನ್ನು ದೇವಾಲಯದಲ್ಲಿ ಇಟ್ಟಿರುತ್ತಾರೆ. ಮನೆಯಲ್ಲೇ ಇಟ್ಟರೂ ಅದಕ್ಕೆ ನಿತ್ಯ ಪೂಜೆ ಸಲ್ಲುತ್ತದೆ. ಈ ವಾದ್ಯಕ್ಕೆ ಸಂಬಂಧಪಟ್ಟಂತೆ ಕಿನ್ನರಿ ಕಿನ್ನುಡಿ ಎಂಬ ರೂಪಗಳೆರಡೂ ಕಂಡುಬರುತ್ತವೆ. ಕಿನ್ನುಡಿ, ಕಿರುಗೆಜ್ಜೆ ಎಂಬ ಶಬ್ದಗಳು ಕಿನ್ನರಿಯ ಮೇಳದ ಕಲ್ಪನೆಯನ್ನು ಅತ್ಯಂತ ಮೋಹಕವಾದ ಮಧುರವಾದ ವಾದವನ್ನು ಕೊಡುವ ಈ ವಾದ್ಯ ನಮ್ಮ ಜನಪದ ವಾದ್ಯಗಳ ರಾಜ ಎನ್ನಬಹುದು.

	ಕಿನ್ನರಿಯನ್ನು ನುಡಿಸುತ್ತ ಜೋಗಿಗಳು ಹಾಡುವ ಹಾಡುಗಳೂ ಕಾವ್ಯಗಳೂ ಅಪಾರ. ಮಹಾಭಾರತದ ವಿವಿಧ ಪರ್ವಗಳನ್ನು ಇವರು ಹಾಡುತ್ತಾರೆ. ಇದನ್ನಿವರು ಭಾರತವಿದ್ಯೆ ಎಂದೂ ಕರೆಯುತ್ತಾರೆ. ಬಾಲ್ಯದಿಂದಲೂ ಗುರುವೊಬ್ಬನಿಂದ ಈ ವಿದ್ಯೆಯನ್ನಿವರು ಅಭ್ಯಾಸಮಾಡುತ್ತಾರೆ. ಅರ್ಜುನಜೋಗಿ ಹಾಡು ಇವುಗಳಲ್ಲೊಂದು. ಕಿನ್ನರ ನಾದದಂತೆಯೇ ಹಾಡುಗಾರಿಕೆಯೂ ಮೋಹಕ ರೀತಿಯಲ್ಲಿರುತ್ತದೆ. ಮಧ್ಯೆ ಮಧ್ಯೆ ವಿವರಣೆಗಳು ಕಲೆತು ನಡೆಸುವ ಮೇಳ ಕರಪಾಲಮೇಳದಂತೆ ಆಕರ್ಷಕವಾಗಿರುತ್ತದೆ.

	ಬಾಲಜೋಗಿಗಳು ಬಾಲನಾಗಮ್ಮನ ಕತೆಯನ್ನು ಮಾಡಿಕೊಂಡು ಬದುಕುವುದರಿಂದ ಅವರಿಗೆ ಆ ಹೆಸರು ಬಂದಿದೆ. ಎಣ್ಣೆ ಜೋಗಿಗಳು ಕಾಲe್ಞÁವನ್ನು ಹೇಳಿಕೊಂಡು ಬರತಕ್ಕವರು. ಟಗರಜೋಗಿಗಳು ಕುರುಬ ಜನಾಂಗಕ್ಕೆ ವಂಶಾವಳಿಗಳನ್ನು ಹೇಳತಕ್ಕವರು. ಒಕ್ಕಲುಗಳನ್ನು ಊರುಗಳನ್ನು ಹಂಚಿಕೊಂಡು ವರ್ಷಕ್ಕೊಮ್ಮೆ ಬಂದು ಕುರುಬಗೌಡರ ಒಕ್ಕಲುಗಳಿಂದ ತಮ್ಮ ಪಾಲಿನ ದವಸಧಾನ್ಯಗಳನ್ನು ಸಂಗ್ರಹಿಸಿಕೊಂಡು ಹೋಗುವುದು ಇವರ ಮುಖ್ಯ ಕಸುಬು. ಅಂಥ ಸಂದರ್ಭದಲ್ಲಿ ದೊಡ್ಡ ಟಗರ ಕೊಂಬನ್ನು ತಂದು ಇವರು ಒಕ್ಕಲುಗಳ ಮನೆಗಳಲ್ಲಿಟ್ಟು ಪೂಜಿಸುತ್ತಾರೆ. ಕುರುಬರಟ್ಟು ಎಂಬ ಹಳೆಯ ಕಡತವನ್ನು ತೆಗೆದು ವಂಶಾವಳಿಗಳನ್ನೂ ಕಾಲe್ಞÁನವನ್ನೂ ಹೇಳುತ್ತಾರೆ. ಈ ಮೂರು ವರ್ಗದ ಜೋಗಿಗಳಿಗೂ ಕಿನ್ನರಿಜೋಗಿಗಳಿಗೂ ಯಾವ ರೀತಿಯ ಸಂಬಂಧವೂ ಇಲ್ಲ. ಜೋಗಿ ಜನಾಂಗದ ಜೊತೆಗೆ ಬೇರೆ ಜನಾಂಗದವರೂ ದೇವರಿಗೆ ಹರಕೆ ಹೊತ್ತು, ಜೋಗಿ ದೀಕ್ಷೆಯನ್ನು ಪಡೆದು ಕಿನ್ನರಿಯನ್ನು ಹಿಡಿಯುವ ಸಂದರ್ಭಗಳೂ ಉಂಟು. ಹರಿಜನರ ಕಿನ್ನರಜೋಗಿಗಳೂ ಕೆಲವು ಕಡೆ ಕಂಡುಬಂದಿದ್ದಾರೆ. 					(ಜೆ.ಎಸ್.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ